ರೀಡರ್ಸ್ ಡೈಜೆಸ್ಟ್
	ಇಂಗ್ಲಿಷ್ ಸೇರಿದಂತೆ ಪ್ರಪಂಚದ 19 ಭಾಷೆಗಳಲ್ಲಿ ಏಕಕಾಲಕ್ಕೆ ಪ್ರಕಟವಾಗುತ್ತಿರುವ ಒಂದು ಮಾಸಪತ್ರಿಕೆ. ಪ್ರತಿ ತಿಂಗಳು ಈ ಪತ್ರಿಕೆಯ 10 ಕೋಟಿ ಪ್ರತಿಗಳನ್ನು ಮುದ್ರಿಸಲಾಗುತ್ತಿದೆ. ಕಳೆದ 75 ವರ್ಷಗಳಿಂದ ಸತತವಾಗಿ ಪ್ರಕಟವಾಗುತ್ತಿರುವ ಈ ಮಾಸಿಕದ ಹುಟ್ಟು ಮತ್ತು ಬೆಳೆವಣಿಗೆ ಕುತೂಹಲಕಾರಿಯಾದುದು. ಡಿ ವಿಟ್ ವಾಲೆಸ್ ಈ ಪತ್ರಿಕೆಯ ಜನಕ. ಈತ 1889ರ ನವೆಂಬರ್ 12ರಂದು ಅಮೆರಿಕದ ಸೇಂಟ್‍ಪಾಲ್‍ನಲ್ಲಿ ಹುಟ್ಟಿದ. ತಂದೆ ಜೇಮ್ಸ್ ಕಾಲೇಜು ಪ್ರಾಧ್ಯಾಪಕ. ತಾಯಿ ಜೆನೆಟ್. ಡಿ ವಿಟ್ ಆರಂಭದ ಶಿಕ್ಷಣವನ್ನು ಪಡೆದು ಬ್ಯಾಂಕ್ ಉದ್ಯೋಗಿಯಾದರು. ಅನಂತರ ಈ ಹುದ್ದೆಯನ್ನು ತೊರೆದು ಓದು ಮುಂದುವರಿಸಲು ಕ್ಯಾಲಿಫೋರ್ನಿಯ ವಿಶ್ವವಿದ್ಯಾಲಯ ಸೇರಿದ. ಆದರೆ ಮತ್ತೆ ವ್ಯಾಸಂಗವನ್ನು ಸ್ಥಗಿತಗೊಳಿಸಿ ಪಿಟ್ಸ್‍ಬರ್ಗ್‍ನ ಕಂಪನಿಯೊಂದರಲ್ಲಿ ಉದ್ಯೋಗಿಯಾದರು. 

	ಡಿ ವಿಟ್‍ಗೆ ಮೊದಲಿನಿಂದ ಓದಿನ ಬಗ್ಗೆ ಕುತೂಹಲವಿತ್ತು. ಕಣ್ಣಿಗೆ ಕಂಡ ಬರೆಹ ಅಥವಾ ಮುದ್ರಣದಲ್ಲಿದ್ದ ಯಾವುದೇ ವಿಷಯವನ್ನು ಓದಿಬಿಡುತ್ತಿದ್ದರು. ಅದು ಔಷಧ ಶೀಷೆಗೆ ಅಂಟಿಸಿದ ಚೀಟಿಯಾಗಿರಬಹುದು. ತಟ್ಟೆ ಲೋಟಗಳ ತಳದಲ್ಲಿರುವ ಮೇಡ್ ಇನ್ ಇಟಲಿ ಎಂಬ ಬರೆಹ ಆಗಿರಬಹುದು. ಉಪಯುಕ್ತ ಮಾಹಿತಿಗಳನ್ನು ಈತ ಸದಾ ಗುರುತುಹಾಕಿ ಇಟ್ಟುಕೊಳ್ಳುತ್ತಿದ್ದರು. ಈ ವಿಚಿತ್ರ ಹವ್ಯಾಸವೇ ಒಂದು ದಿನ ರೀಡರ್ಸ್ ಡೈಜಸ್ಟ್ ಎಂಬ ಪತ್ರಿಕೆಯ ಹುಟ್ಟಿಗೆ ನಾಂದಿಯಾಯಿತು. ಡಿ ವಿಟ್ ಎರಡನೇ ಮಹಾಯುದ್ಧದಲ್ಲಿ ಗಾಯಗೊಂಡು ಫ್ರಾನ್ಸಿನಲ್ಲಿ ಚೇತರಿಸಿಕೊಳ್ಳುತ್ತಿದ್ದಾಗ ಹಲವಾರು ಪತ್ರಿಕೆಗಳನ್ನು ಓದುತ್ತಿದ್ದರು. ಅವರು ಓದಿದ ಕೆಲವು ಲೇಖನಗಳು ಸರ್ವಕಾಲಕ್ಕೂ ಆಸಕ್ತಿದಾಯಕವಾದ ಓದುವ ಸಾಮಗ್ರಿಯಾಗಬಹುದೆನ್ನಿಸಿತು. ಬೋಧಪ್ರದ, ಮಾರ್ಗದರ್ಶನ, ರಂಜನೀಯವಾದ ಲೇಖನಗಳನ್ನು ಸಂಗ್ರಹಿಸಿ, ಅವಶ್ಯ ಅಂಶಗಳಿಗೆ ಒತ್ತುಕೊಟ್ಟು ಪರಿಷ್ಕರಿಸಿ, ನಿಯಕಾಲಿಕೆಯ ರೂಪದಲ್ಲಿ ಪ್ರಕಟಿಸುವ ಕಲ್ಪನೆ ಮೂಡಿತು. ಸಮಾನಮನಸ್ಕಳಾದ ಅವರ ನವವಧು ಲೈಲಾ ಈ ಯೋಜನೆ ಪ್ರೋತ್ಸಾಹಿಸಿದಳು. 1920ರಲ್ಲಿ `ರೀಡರ್ಸ್ ಡೈಜೆಸ್ಟ್‍ನ ಮಾದರಿಪ್ರತಿ ಸಿದ್ಧವಾಯಿತು. ಪ್ರಕಟಣೆಗೆ ಯಾವ ಪ್ರಕಾಶನ ಸಂಸ್ಥೆಯೂ ಮುಂದೆ ಬರಲಿಲ್ಲ. ತಂದೆ ಕೂಡ ಪ್ರಕಟಣೆಗೆ ಹಣ ಕೊಡಲಿಲ್ಲ. ಡಿ ವಿಟ್ ನಿರಾಶರಾಗಲಿಲ್ಲ. ನ್ಯೂಯಾರ್ಕ್ ನಗರ ಸಮೀಪದ ಗ್ರೀನ್‍ವಿಜ್ ಎಂಬ ಹಳ್ಳಿಯಲ್ಲಿ ಮನೆಯೊಂದನ್ನು ಬಾಡಿಗೆಗೆ ಪಡೆದರು. ಕಛೇರಿಯ ಬಾಡಿಗೆ ನೀಡಲೆಂದು ನವವಧು ಲೈಲಾ ತನ್ನ ನೌಕರಿ ಮುಂದುವರೆಸಿದರು. ಅಚ್ಚಾದ 5,000 ಪ್ರತಿಗಳೆಲ್ಲಾ ಮಾರಾಟವಾದವು. ಪತ್ರಿಕೆ ಜನಪ್ರಿಯವಾಯಿತು. 1938ರಲ್ಲಿ ಬ್ರಿಟನ್ನಿನಿಂದ ಅಂತಾರಾಷ್ಟ್ರೀಯ ಆವೃತ್ತಿ ಪ್ರಕಟವಾಯಿತು. ಭಾರತದ ಆವೃತ್ತಿ ಪ್ರಕಟವಾದದ್ದು 1954ರಲ್ಲಿ. ಪತ್ನಿ ಲೈಲಾ ಜೊತೆಗೂಡಿ ರೀಡರ್ಸ್ ಡೈಜೆಸ್ಟ್ ಅಸೋಸಿಯೇಷನ್ ರಚಿಸಿದರು. ಪತ್ರಿಕೆಗೆ ಚಂದಾದಾರರಾಗುವಂತೆ ಕೋರಿ ಪ್ರಕಟಣೆ ನೀಡಿದಾಗ ಆಗಿನ ಚಂದಾಹಣ 3 ಡಾಲರ್ ನೀಡಿ 1500 ಜನ ಚಂದಾದಾರರಾದರು. 64 ಪುಟಗಳಿದ್ದ ರೀಡರ್ಸ್ ಡೈಜೆಸ್ಟ್‍ನ ಮೊದಲ ಸಂಚಿಕೆ 1922ರ ಫೆಬ್ರವರಿಯಲ್ಲಿ ಪ್ರಕಟವಾಯಿತು. ಒಂದು ವರ್ಷದ ಅವಧಿಯಲ್ಲಿ ಪತ್ರಿಕೆಗೆ ಉತ್ತಮ ಪ್ರತಿಕ್ರಿಯೆ ದೊರೆತು ಡೈಜೆಸ್ಟ್‍ನ ಕಛೇರಿ 1922ರ ಸೆಪ್ಟೆಂಬರ್‍ನಲ್ಲಿ ಗ್ರೀನ್‍ವಿಜ್ ಹಳ್ಳಿಯಿಂದ ಪ್ರೆಸೆಂಟ್‍ವಿಲೆಗೆ ಸ್ಥಳಾಂತರವಾಯಿತು. 1934ರ ವೇಳೆಗೆ 12 ಮಂದಿ ಸಂಪಾದಕರ ತಂಡ ಪತ್ರಿಕೆಯ ಜವಾಬ್ದಾರಿಯನ್ನು ಹೊತ್ತಿತು. ಪತ್ರಿಕೆಯಲ್ಲಿ ಪ್ರಕಟವಾಗುತ್ತಿದ್ದ ಕತೆ, ಕವನ, ವಿಜ್ಞಾನ, ವಿಸ್ಮಯ, ಸಂಶೋಧನೆ, ವಿಡಂಬನೆ ಮುಂತಾದ ಹಲವು ಹತ್ತು ಸಂಗತಿಗಳು ಓದುಗರ ಆಸಕ್ತಿಯ ವಿಷಯಗಳಾಗಿದ್ದುವು. 	1950ರಲ್ಲಿ ರೀಡರ್ಸ್ ಡೈಜೆಸ್ಟ್ ಕಂಡೆನ್‍ಸ್ಡ್ ಬುಕ್‍ಕ್ಲಬ್ ಸ್ಥಾಪನೆಗೊಂಡಿತು. 

	ಡಿ ವಿಟ್ ಈ ಪತ್ರಿಕೆಯಿಂದ ಸಾಕಷ್ಟು ಸಂಪತ್ತನ್ನೂ ಗಳಿಸಿದರು. ಡಿ ವಿಟ್ ದಂಪತಿಗಳಿಗೆ ಮಕ್ಕಳಿರಲಿಲ್ಲವಾಗಿ ಕೊಡುಗೈ ದಾನಿಯೂ ಆಗಿದ್ದರು. ಈತ 1981 ಮಾರ್ಚ್ 30ರಂದು ನಿಧನಹೊಂದಿದರು. ಈತನ ಪತ್ನಿ ಲೈಲಾ ಅಚಿಸನ್ 1984ರಲ್ಲಿ ನಿಧನರಾದರು. ಡಿ ವಿಟ್ ಬೆಳೆಸಿದ ರೀಡರ್ಸ್ ಡೈಜೆಸ್ಟ್ ಪತ್ರಿಕೆ ಈಗಲೂ ಜಗತ್ತಿನ ಮಿಲಿಯನ್‍ಗಟ್ಟಲೆ ಓದುಗರ ಅಚ್ಚುಮೆಚ್ಚಿನ ಮಾಸಪತ್ರಿಕೆಯಾಗಿದೆ. ಪ್ರಕಟವಾದ ವಿಚಾರ ಪ್ರಚೋದಕ, ಬೋಧಪ್ರದ ಲೇಖನಗಳ ಸಾರ ಸಂಗ್ರಹ; ಈಗಲೂ ಅದೇ ಸೂತ್ರದ ಅನುಸರಣೆ. ಈ ಪತ್ರಿಕೆಯ ಪುಸ್ತಕ ಪ್ರಕಟಣ ವಿಭಾಗ ಅನೇಕ ಉಪಯುಕ್ತ ಹಾಗೂ ಮೌಲಿಕ ಗ್ರಂಥಗಳನ್ನು ಹೊರತಂದಿದೆ.
					

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ
						(ಸಿ.)